ಷೀಲೆ, ಕಾರ್ಲ್ ವಿಲ್‍ಹೆಲ್ಮ್
	1742-86. ಸ್ವೀಡನ್ನಿನ ರಸಾಯನ ವಿe್ಞÁನಿ. ಮರಣಶಯ್ಯೆಯಲ್ಲಿ ಮದುವೆ ಸೋಜಿಗವೆನಿಸಿದರೂ ಸತ್ಯ. ಹಾಗೆ ನಡೆದದ್ದುಂಟು. ವಿಧವೆಯೊಬ್ಬಳನ್ನು ಲಗ್ನವಾಗುವುದಾಗಿ ಮಾತು ಕೊಟ್ಟಿದ್ದಾಗಿದೆ. ವಚನ ಪಾಲನೆಗಾಗಿ ಮತ್ತು ನಿವ್ರ್ಯಾಜ ಪ್ರೇಮದ ಕುರುಹಾಗಿ ಮದುವೆ ನಡೆಯಲೆಂದು ಆತನ ಬಯಕೆ. ಹಾಸಿಗೆಯ ಬಳಿಯೇ ಧರ್ಮಗುರುವೊಬ್ಬ ಸಾಂಪ್ರದಾಯಿಕ ವಿಧಿಗಳನ್ನು ಪೂರೈಸಿ ದಾಂಪತ್ಯ ಕೂಡಿಸಿದ. ಮದುವೆ ನಡೆದು 48 ಗಂಟೆಗಳು ಕಳೆಯಿತು ಎನ್ನುವುದರಲ್ಲೇ ರೋಗಿ ಕೊನೆಯುಸಿರೆಳೆದ. ವಧು ಮತ್ತೆ ವಿಧವೆಯಾದಳು. ಹನ್ನೊಂದು ಮಕ್ಕಳ ದೊಡ್ಡ ಕುಟುಂಬದಲ್ಲಿ ಏಳನೆಯವನಾದ ಈತ ಕುಟುಂಬ ನಿರ್ವಹಣೆಗಾಗಿ ಕೆಲಸ ಹಿಡಿಯುವುದು ಅನಿವಾರ್ಯವಾಗಿತ್ತು. ಹದಿನಾಲ್ಕರ ಈ ಬಾಲಕ ಗಂದಿಗೆ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿದ. ಅಂದಿನ ಗಂದಿಗೆ ವ್ಯಾಪಾರಿಗಳು ವೃತ್ತಿಪರಿಣತರು. ಅಗತ್ಯ ಮದ್ದುಗಳನ್ನು ಪ್ರಮಾಣಬದ್ಧವಾಗಿ ತಾವೇ ತಯಾರಿಸಿ ವಿತರಿಸುತ್ತಿದ್ದರು. ಅಂಥ ತಜ್ಞರ ಬಳಿ ಕೆಲಸ ಮಾಡುವುದೆಂದರೆ ವಿಶ್ವವಿದ್ಯಾಲಯ ಶಿಕ್ಷಣಕ್ಕೆ ಸಮ ಎಂದು ಭಾವಿಸಲಾಗಿತ್ತು. ಹೀಗಾಗಿ ಚೂಟಿಯಾಗಿದ್ದ ಈತ ಹೆಸರಾಂತ ಗಂದಿಗನಾದ. ಆಗಿಂದಾಗ್ಗೆ ನೌಕರಿ ಬದಲಾಯಿಸುತ್ತ ಕೊನೆಗೆ ಸ್ಟಾಕ್‍ಹೋಮ್‍ನಲ್ಲಿ ನೆಲೆನಿಂತ.

	ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗುವ ಅವಕಾಶಗಳು ಇದ್ದರೂ ಅವನ್ನು ಬಯಸದೆ ಗಂದಿಗನಾಗಿಯೇ ಉಳಿಯಲು ನಿರ್ಧರಿಸಿದ. ಪ್ರಷ್ಯ ಮತ್ತು ಇಂಗ್ಲೆಂಡ್‍ಗಳ ರಾಜಾಸ್ಥಾನಗಳಿಂದ ಬಂದ ಕರೆಗಳನ್ನೂ ಮನ್ನಿಸಲಿಲ್ಲ. ಈತನ ಸಂಶೋಧನೆಗಳ ವ್ಯಾಪ್ತಿ, ವಿಸ್ತಾರ ಸಸ್ಯಪ್ರಪಂಚದ ಮುಖ್ಯ ಪದಾರ್ಥಗಳಾದ ಟಾರ್ಟಾಯಿಕ್, ಸಿಟ್ರಿಕ್, ಬೆನ್ಸೋಯಿಕ್, ಮ್ಯಾಲಿಕ್, ಅಕ್ಸಾಲಿಕ್ ಮತ್ತು ಗ್ಯಾಲಿಕ್ ಆಮ್ಲಗಳು, ಖನಿಜಗಳಾದ ಮಾಲಿಬ್ಡೆಕ್ ಮತ್ತು ಆರ್ಸೆನಿಯಸ್ ಆಮ್ಲಗಳು. ಪ್ರಾಣಿವಲಯದ ಲ್ಯಾಕ್ಟಿಕ್ ಮತ್ತು ಯೂರಿಕ್ ಆಮ್ಲಗಳನ್ನು ಪತ್ತೆಹಚ್ಚಿದಾತ ಈತ. ವಿಷಾನಿಲಗಳಾದ ಹೈಡ್ರೊಜನ್ ಸಲ್ಫೈಡ್, ಹೈಡ್ರೊಜನ್ ಫ್ಲೊರೈಡ್ ಮತ್ತು ಹೈಡ್ರೊಜನ್ ಸಯನೈಡ್‍ಗಳ ಆವಿಷ್ಕಾರವೂ ಇವನದೆ. ಹೈಡ್ರೊಜನ್ ಸಯನೈಡ್‍ನ ರುಚಿ ನೋಡಿಯೂ ಇವನು ಬದುಕಿ ಉಳಿದದ್ದು ಪವಾಡವೇ ಸರಿ. ಅನಿಲ ಧಾತುಗಳಾದ ಕ್ಲೋರಿನ್, ನೈಟ್ರೊಜನ್, ಆಕ್ಸಿಜನ್‍ಗಳು, ಲೋಹಗಳಾದ ಬೇರಿಯಮ್, ಮ್ಯಾಂಗನೀಸ್, ಮಾಲಿಬ್ಡಿನಮ್ ಮತ್ತು ಟಂಗ್‍ಸ್ಟನ್‍ಗಳ ಪತ್ತೆಗಾಗಿ ಇವನು ಶ್ರಮಿಸಿದ್ದು ನಿಜ. ಆದರೆ ಹದಿನೆಂಟನೆಯ ಶತಮಾನದ ವೈe್ಞÁನಿಕ ಕ್ಷೇತ್ರ ಗೊಂದಲಮಯವಾಗಿತ್ತು. ನಾಲ್ಕಾರು ಮಂದಿ ಏಕಕಾಲದಲ್ಲಿ ಒಂದೇ ಪ್ರಯೋಗ ಮಾಡುವುದು, ಅದರಲ್ಲಿ ಯಾರು ಫಲಿತಾಂಶವನ್ನು ಮುಂದಾಗಿ ಪ್ರಕಟಿಸುತ್ತಿದ್ದರೋ ಅವರಿಗೆ ಗೌರವ ದೊರೆತು ಉಳಿದವರ ಶ್ರಮ ನಿರರ್ಥಕವೆನಿಸಿ ನಿರಾಶೆಯಾಗುವುದು ಸರ್ವೇಸಾಮಾನ್ಯವಾಗಿತ್ತು. ಇವನದೂ ಇದೇ ಪಾಡು. ಆಕ್ಸಿಜನ್ ಪತ್ತೆಮಾಡಿದ ಗೌರವ ಪ್ರೀಸ್ಟ್ಲಿಗೂ (1733-1804), ಕ್ಲೋರಿನ್‍ದು ಡೇವಿಗೂ (1778- 1829) ಲಭಿಸಿದುವು. ಷೀಲೆ ಶೋಧಿಸಿದ ತಾಮ್ರದ ಆರ್ಸಿನೇಟನ್ನು ಷೀಲೆಹಸುರು ಎಂದೂ ಕ್ಯಾಲ್ಸಿಯಮ್ ಟಂಗ್‍ಸ್ಟೇಟ್ ಖನಿಜವನ್ನು ಷೀಲೈಟ್ ಎಂದೂ ಹೆಸರಿಸಿರುವುದು ಇವನಿಗೆ ಸಂದ ಏಕೈಕ ಗೌರವ.

	ಸ್ಟಾಕ್‍ಹೋಮ್‍ನಲ್ಲಿದ್ದಾಗ ಇವನು ಕೆಲಸ ಮಾಡುತ್ತಿದ್ದ ಕೊಠಡಿಗೆ ಒಂದು ವಿಶಾಲವಾದ ಕಿಟಕಿಯಿತ್ತು. ಅದರ ಹೊಸ್ತಿಲಲ್ಲಿಟ್ಟಿದ್ದ ಬೆಳ್ಳಿಯ ಕ್ಲೋರೈಡ್ ಮೇಲೆ ಬಿದ್ದ ಬಿಸಿಲಿನ ಪ್ರಭಾವದಿಂದ ಅದು ವಿಭಜಿತವಾಗಿ ಸೂಕ್ಷ್ಮ ಕಣಗಳ ರೂಪದಲ್ಲಿ ಕಪ್ಪು ಬೆಳ್ಳಿ ಉತ್ಪತ್ತಿಯಾಯಿತು. ಸೌರ ರೋಹಿತದ ವಿವಿಧ ಭಾಗಗಳು ಬೆಳ್ಳಿಯ ಕ್ಲೋರೈಡ್‍ನ ವಿಭಜನ ದರವನ್ನು ಹೇಗೆ ನಿಯಂತ್ರಿಸುತ್ತವೆ ಎಂಬುದನ್ನು ಈತ ಪರೀಕ್ಷಿಸಿ ಬರೆದಿಟ್ಟಿದ್ದಾನೆ. ಮುಂದೆ ಈ ಶೋಧ ಛಾಯಾಚಿತ್ರಗ್ರಹಣ ತಂತ್ರಕ್ಕೆ ಆಧಾರವಾಯಿತು. ಸಂಶೋಧನೆಯೇ ಉಸಿರು, ಆನಂದಕ್ಕಾಗಿ ಆವಿಷ್ಕಾರ, ದುಡಿಮೆಯೇ ಜೀವನ ಸಾಫಲ್ಯ ಎಂಬ ತತ್ತ್ವಗಳನ್ನು ತ್ರಿಕರಣಪೂರ್ವಕವಾಗಿ ಅನುಷ್ಠಾನಿಸಿದ ಈತ ಸ್ವಂತ ಆರೋಗ್ಯವನ್ನು ಕೂಡ ಲೆಕ್ಕಿಸದೆ ತಾನು ನಂಬಿದ ಹಾದಿಯಲ್ಲಿ ದೈತ್ಯ ದಾಪು ಇಟ್ಟ, ತೀರ ಚಿಕ್ಕ ಪ್ರಾಯದಲ್ಲೇ ನಿಧನನಾದ.												
(ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ